ಪಂಚಭೂತಗಳು -
	ಪೃಥ್ವಿ, ಅಪ್, ತೇಜಸ್ಸು, ವಾಯು, ಆಕಾಶಗಳನ್ನು ಪಂಚಭೂತಗಳೆಂದು ಪ್ರಾಚೀನ ದಾರ್ಶನಿಕರು ಕರೆದಿರುತ್ತಾರೆ. ಇವುಗಳಿಂದ ಸ್ಥಾವರ ಜಂಗಮಾತ್ಮಕವಾದ ಪ್ರಪಂಚದ ಸ್ಥಿತಿಗತಿಯೆಂದು ಅವರ ಅಭಿಪ್ರಾಯ. ಅಂಧಕಾರದಲ್ಲಿ ತುಂಬಿದ್ದ ಪ್ರಪಂಚದಲ್ಲಿ ತೇಜೋರೂಪಿಯಾದ ನಿರಾಕಾರ ಆತ್ಮಶಕ್ತಿ ಪ್ರಪ್ರಥಮವಾಗಿ ಆಕಾಶವನ್ನು ಆಕಾಶತತ್ತ್ವದಿಂದ ವಾಯುತತ್ತ್ವವನ್ನು ಅದರಿಂದ ಅಗ್ನಿತತ್ತ್ವವನ್ನು ಮತ್ತದರಿಂದ ಆಪ್ ತತ್ವವನ್ನು ಅದರಿಂದ ಪೃಥ್ವಿತತ್ತ್ವವನ್ನೂ ಸೃಷ್ಟಿ ಮಾಡಿರುವುದಾಗಿ ವೇದಮೂಲಗಳಿಂದ ತಿಳಿಯಬಹುದು. ಇದು ಪ್ರಪಂಚ ಸೃಷ್ಟಿಯ ವರ್ಣನೆ.

	ಪೃಥ್ವಿ : ಪ್ರತಿಯೊಂದು ಪ್ರಾಣಿಯಲ್ಲೂ ಪೃಥ್ವಿಯ ಅಂಶವಿರುತ್ತದೆ. ಅಲ್ಲದೇ ಚರಾಚರ ಜೀವಿಗಳಿಗೆ ಇದು ಆಧಾರ ಭೂತವಾಗಿರುತ್ತದೆ. ರೂಪರಸ ಶಬ್ದ ಗಂಧ ಸ್ಪರ್ಶ ಎಲ್ಲ ಗುಣಗಳೂ ಪೃಥ್ವಿಯಲ್ಲಿ ಇವೆ. ಇದಕ್ಕೆ ಪೃಥ್ವಿ ಎಂದು ಹೆಸರು ಬರಲು ಒಂದು ಕಥೆ ಇದೆ. ಪೀನ ಎಂಬ ರಾಜ ನಾಸ್ತಿಕನಾದ್ದರಿಂದ ಬಿತ್ತಿದ ಬೀಜಗಳನ್ನೆಲ್ಲ ಭೂಮಿಯೇ ನುಂಗುತ್ತಿತ್ತು. ಆಗ ಪ್ರಜೆಗಳೆಲ್ಲರೂ ರಾಜನ ಶರೀರವನ್ನು ಮಥನ ಮಾಡಿ ಪೃಥು ಎಂಬುವವನನ್ನು ಸೃಜಿಸಿದರು. ಪೃಥು ಪ್ರಜೆಗಳ ಕಷ್ಟ ನೋಡಿ ಮನಮರುಗಿ ಭೂಮಿ ನುಂಗಿದ್ದ ಎಲ್ಲ ವಸ್ತುಗಳನ್ನೂ ಕೊಡಿಸಿ ಸಮೃದ್ಧಿಯನ್ನುಂಟುಮಾಡಿದ. ಅಂದಿನಿಂದ ಭೂಮಿಯನ್ನು ಪೃಥ್ವಿ, ಪೃಥ್ವಿವೀ (ಪೃಥುರಾಜನ ಮಗಳು) ಎಂಬ ಹೆಸರಿನಿಂದ ಕರೆಯಲಾರಂಭಿಸಿದರು.

	ಅಪ್ : ಇದರ ಅಭಿಮಾನ ದೇವತೆ ವರುಣ. ಪಶ್ಚಿಮ ದಿಕ್ಕಿಗೆ ಒಡೆಯ. ಪ್ರಳಯ ಕಾಲದಲ್ಲಿ ಪ್ರಪಂಚ ಜಲಮಯವಾದಾಗ ಪರಮಾತ್ಮ ವಟಪತ್ರದಲ್ಲಿ ಶಯನ ಮಾಡಿ ತೇಲಾಡುತ್ತಿರುತ್ತಾನೆ. ನೀರು ಅಭಾಸ್ವರ ಶ್ವೇತವರ್ಣದಲ್ಲಿದೆ. ಅದರ ರುಚಿ ಮಧುರ; ಪ್ರಾಣಿಗಳ ರಸನೇಂದ್ರಿಯ ವೇದ್ಯ.

	ತೇಜಸ್ : ತೇಜೋವಾ ಅಗ್ನಿಃ, ಅಗ್ನಿಯ ಪರ್ಯಾಯ ಪದ. ಆಗ್ನೇಯ ದಿಕ್ಕಿಗೆ ಒಡೆಯ. ಋಗ್ವೇಗದಲ್ಲಿಯ ಮೊದಲನೆಯ ದೇವತೆ. ವಾಯತತ್ತ್ವದಿಂದ ಉಂಟಾದ್ದು. ಮನುಷ್ಯನ ಚಕ್ಷುರಿಂದ್ರಿಯ ಮತ್ತು ಜಠರಗಳಲ್ಲಿ ಇದನ್ನು ಗುರುತಿಸುತ್ತಾರೆ. ಇನ್ನೊಂದು ಮೂರ್ತಸ್ವರೂಪ ಸೂರ್ಯ. ದೇವತೆಗಳಿಗೆ ಅಗ್ನಿಯ ಮುಖಾಂತರ ಹವಿಸ್ಸನ್ನು ಕೊಡುತ್ತಾರೆ. ಅಗ್ನಿಯಲ್ಲಿ ಮುಖ್ಯವಾದ ಮೂರು ಪ್ರಭೇದಗಳಿವೆ. ಗಾರ್ಹಪತ್ಯ ದಾಕ್ಷಿಣ, ಅಹವನೀಯ, ಆಜ್ಯ ಮತ್ತು ಸುವರ್ಣವನ್ನು ತೇಜಸ್ಸೆಂದು ಹೇಳುತ್ತಾರೆ. ಇದರಿಂದಲೇ ಪ್ರಪಂಚದ ಅಂಧಕಾರ ನೀಗುತ್ತದೆ.

	ವಾಯು :ಅನುಷ್ಣಾಶೀತಸ್ಪರ್ಶವಾನ್ ವಾಯುಃ, ಸ್ಪರ್ಶ ಮಾತ್ರದಿಂದಲೇ ಇದನ್ನು ತಿಳಿಯಬಹುದು. ಇದರ ಅಭಿಮಾನ ದೇವತೆಗೂ ಇದೇ ಹೆಸರು. ಪ್ರಾಣಿಗಳ ಜೀವಿಕೆಗೆ ಇದು ಅತಿಮುಖ್ಯವಾದದ್ದು. ಮುಖ್ಯ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ ಎಂಬುವು ಐದು ಮುಖ್ಯ ಪ್ರಭೇಧಗಳು. ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ, ಇವು ಉಪಭೇದಗಳು. ಪ್ರಧಾನವಾದ ಪ್ರಾಣ ಹೃದಯವನ್ನು, ಅಪಾನ ಗುದವನ್ನು, ಸಮಾನ ನಾಭಿಯನ್ನು, ಉದಾನ ಕಂಠವನ್ನು, ವ್ಯಾನ ಶರೀರದ ಸಕಲ ಭಾಗವನ್ನು ವ್ಯಾಪಿಸಿವೆ. ನಾಗ ವಾಗಿಂದ್ರಿಯದಲ್ಲಿದೆ, ಕೂರ್ಮ ಉಸ್ಠೀಲನ ಕ್ರಿಯೆಯಲ್ಲಿ, ಕೃಕರ ಕ್ಷುತ್ಪಿ ಪಾಸೆಯಲ್ಲಿ, ದೇವದತ್ತ ಆಕಳಿಕೆ ಬಿಕ್ಕಳಿಕೆಗಳಲ್ಲಿ ಧನಂಜಯ ದೇಹದ ಸಕಲಭಾಗದಲ್ಲಿ ಕಂಡುಬರುತ್ತದೆ. ಚಂದ್ರವಂಶದ ಕುಶ ನಾಭಿರಾಜನ ನೂರು ಪುತ್ರಿಯರಲ್ಲಿ ಮನಸೋತು ತಿರಸ್ಕøತನಾಗಿ ಅವರಿಗೆ ವಾಯುವಿಕಾರ ಉಂಟುಮಾಡಿದ ಕಥೆ ಇದೆ. ಐಶ್ವರ್ಯ ಕಾಮನೆ ಉಳ್ಳವರು ವಾಯು ದೇವತಾಕವಾದ ಯಾಗವನ್ನು ಮಾಡಿದರೆ ಸಂಪತ್ತನ್ನು ಹೊಂದುತ್ತಾರೆ ಎಂದು ಶ್ರುತಿವಾಕ್ಯ.

	ಆಕಾಶ : ಆಕಾಶ ಅಥವಾ ಅವಕಾಶ ಶಬ್ದಗ್ರಾಹಿಯಾಗಿದೆ. ಪಂಚಭೂತಗಳಲ್ಲಿ ಇದು ಮೊದಲನೆಯದು. ಮುನುಷ್ಯನ ಅವಯವಗಳಲ್ಲಿ ಮುಖ್ಯವಾದ ಕಿವಿಯಲ್ಲಿದನ್ನು ನೋಡಬಹುದು. ಅಲ್ಲದೆ ಹೊಟ್ಟೆ ಮುಂತಾದುವುಗಳಲ್ಲೂ ಈ ತತ್ತ್ವ ಅಡಗಿದೆ. ಆತ್ಮನು ಸೂಕ್ಮರೂಪದಲ್ಲಿ ಶರೀರದಲ್ಲಿರುತ್ತಾನೆ. ಶರೀರತ್ಯಾಗ ಮಾಡಿದ ಅನಂತರ ಮಹಾತ್ಮನಲ್ಲಿ ಲೀನವಾಗುತ್ತಾನೆ. ದೇವತೆಗಳು ಆಕಾಶದಲ್ಲಿ ಓಡಾಡುತ್ತಾರೆ. ದೇವತೆಗಳ ವಾಸಸ್ಥಳವಾದ ಸ್ವರ್ಗವನ್ನು ಆಕಾಶದಲ್ಲಿಯೇ ಕಲ್ಪಿಸಿದ್ದಾರೆ. 				(ಕೆ.ಎಂ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ